ವರುಣ ರಾಗ



ಅವಳೋ ಮಾತಿನ ಮಲ್ಲಿ....ಆದರೆ ಆ ಒಂದು ಭೇಟಿ ಮಾತ್ರ  ಅವಳನ್ನ ತೀರದ ಮೌನಕ್ಕೆ ಗುರಿಯಾಗಿಸಿತ್ತು. ಈ ಮೊದಲ ಭೇಟಿಯೇ ಕೊನೆಯ ಭೇಟಿ ಎಂದು ನೆನೆದಾಗಲೆಲ್ಲಾ ಅವಳ ಮನಸ್ಸು ಭಾರವೆನಿಸುತ್ತಿತ್ತು.ಆ ಕಾರಣಕ್ಕಾಗಿಯೇ ಯಾವುದಾದರೂ ಒಂದು ನೆಪ ಹೇಳಿ ಮುಂದುಡುತ್ತಲೆ ಇರುತ್ತಿದ್ದಳು. ಆಗಾಗ ವಾರಕ್ಕೊಮ್ಮೆ "ಯಾವಾಗ ಸಿಗುತ್ತಿರಾ?" ಎಂಬ ಅವನಿಂದ ಬರುವ ಸಂದೇಶವನ್ನು ಓದಿ,ದಿನ ಪೂರ ಖುಷಿ ಪಡುವ ಸಂದರ್ಭವನ್ನು ಕಿಂಚಿತ್ತು ಕಳೆದು ಕೊಳ್ಳಲು  ಅವಳಿಗೆ ಇಷ್ಟವಿರಲಿಲ್ಲ.ಹೀಗೆ ಒಂದೆರಡು ತಿಂಗಾಳಾಯಿತು , ಅವಳೆಷ್ಟು ದಿನ ನೆಪವೊಡ್ಡಿಯಾಳು, ಆ ಭೇಟಿಗೆ ಒಪ್ಪುವ ದಿನ ಅನಿವಾರ್ಯವಾಗಿ ಒದಗಿತು. ಅವಳಿಗೋ ಅವನನ್ನು ನೋಡಿ,ಮಾತಾನಾಡುವ ಖುಷಿ ಒಂದು ಕಡೆಯಾದರೆ, ಇದ ನಂತರ ಫೋನಾಗಲಿ, ಮೇಸೆಜ್ ಆಗಲಿ ಅವನಿಂದ ಬರುವುದಿಲ್ಲ ಎಂದಾಗ ಅವಳ ಮನ ವ್ಯಾಕುಲತೆಗೆ ತುತ್ತಾಗುತಿತ್ತು.


ಆ ದಿನ ಅವಳಿಗೋ ಹೇಳ ತೀರದ ಆನಂದ,ಆಕೆ ಎಂದೂ ಕನ್ನಡಿ ಮುಂದೆ ನಿಂತ ಹುಡಿಗೆಯೇ ಅಲ್ಲ,ಅವತ್ಯಾಕೊ ಒಂಚೂರು ಸಿಂಗರಿಸಿಕೊಳ್ಳ ಮನಸ್ಸಾಯ್ತು, ಶುಭ್ರ ಬಿಳಿ ವಸ್ತ್ರದ ಮೇಲೆ ಹಸಿರು ಬಣ್ಣದ ಚಿತ್ತಾರದ ಚೂಡಿದರ್,ಹಣೆಯ ನಡುವಲ್ಲಿ ಕಂಡರೂ ಕಾಣದಂತಿರುವ ಬಿಂದಿ, ಆಗಾಗ್ಗೆ ಗಾಳಿಲಿ ಮುಂಗುರುಳನ್ನು ಸರಿಸಲ್ಲಿಕ್ಕೆ ಪುಡಿಗೂದಲು ಬಿಟ್ಟಿದ್ದಳು,ಇದಿಷ್ಟೇ ಅವಳ ಅಲಂಕಾರ.ಆ ದಿನ  ಸೂರ್ಯ ಮೋಡದ ಮರೆಯಲ್ಲಿ ಕಣ್ಣು ಮುಚ್ಚಾಲೆಯಾಡುತ್ತಿದ್ದ ಮಳೆ ಬರುವ ಎಲ್ಲಾ ಲಕ್ಷಣಗಳಿದ್ದವು.ಆಕೆ ಅವಳ ಮನೆಯಿಂದ ಬಸ್ ಹತ್ತಿ,ಅವನು ಹೇಳಿದ್ದ ಜಾಗಕ್ಕೆ ಬಂದಿಳಿದಳು. "ಏನ್ ಈ ಸ್ವಾಮಿ ಎಲ್ರೂ ಹುಡ್ಗೀರು ಹುಡ್ಗರ್ನ ಕಾಯ್ಸುದ್ರೆ ನನ್ನೆ ಕಾಯುಸ್ತಿದನಲ್ಲ"ಎಂದುಕೊಂಡೆ ಅವನಿಗೆ ಕರೆ ಮಾಡಿದಳು . ಒಂದೆರಡು ಬಾರಿ ಫೋನ್ ಅಲ್ಲೂ ಮಾತಾಡಿದ್ದರೂ ಫೋನ್ ಮಾಡೋ ವೇಳೆ ಒಂದೆರಡು ನಿಮಿಷ ಮಾಡ್ಲೊ ಬೇಡ್ವೊ ಅಂತಲೆ ಧೈರ್ಯ ಮಾಡಿ ಫೋನ್ ಹಚ್ಚಿದಳು."ಹೆಲೋ ಸರ್  ಎಲ್ಲಿದ್ದಿರಾ?" ಎಂದು ಮೆಲು ದನಿಯಲ್ಲಿ ಕೇಳಿದಳು, ಆ ಕಡೆಯಿಂದ ಅವನು "ಆ ಮೇಡಂ ನಮ್ ಏರಿಯಾದಲ್ಲಿ ಸಿಕ್ಕಾಪಟ್ಟೆ ಮಳೆ ಸ್ವಲ್ಪ ಬರೋದಿಕ್ಕೆ ತಡ ಆಗುತ್ತೆ , ಕಾಯೋದಿಕ್ಕೆ ಆಗುತ್ತಾ ಮೇಡಂ " ಅಂದ. ಅವ್ಳಿಗೂ ಇಲ್ಲ ಅನ್ನೊಕ್ಕಾಗ್ಲಿ ಬಾಯಿ ಬರ್ಲಿಲ್ಲ "ಸರಿ ಸರ್ ಬನ್ನಿ ,ಕಾಯ್ತಿರ್ತಿನಿ" ಅಂತ ಕರೆ ಇಟ್ಟಳು.


ಇತ್ತ ಇವಳು ನಿಂತಿದ್ದ ಕಡೆಯೂ ಜೋರು ಮಳೆ ಶುರುವಾಗತೊಡಗಿತ್ತು, ಅರ್ಧ ತಾಸಾದರು ಮಳೆ ನಿಲ್ಲಲೆ ಇಲ್ಲ,ಕಾಯೋದು ಅವ್ಳಿಗೆ ಕರಗತವಾಗಿದ್ದ ವಿದ್ಯೆ ಯಾಕ್ ಕೇಳಿ ಪ್ರತಿನಿತ್ಯ ಕೆ.ಎಸ್.ಆರ್.ಟಿ.ಸಿ.  ಬಸ್ಗಾಗಿ ಕಾದು ಕಾದು ಕಾಯೋದು ಅವ್ಳಿಗೆ ರೂಢಿಯಾಗಿತ್ತು.ಆದರೆ ಆ ಕಾಯುವಿಕೆಯಲ್ಲಿ ಬೇಸರವಾಗಲಿ,ಸಿಟ್ಟಾಗಲಿ ಇರಲಿಲ್ಲ ಬದಲಾಗಿ ಆ ಸಂಧ್ಯಾರಾಗದಲ್ಲಿ ಅವಳಿಗೆ ತಿಳಿಯದೆ ಮನದ ಮೂಲೆಯಲ್ಲಿ ಅನುರಾಗ ಚಿಗುರೊಡಿದಿತ್ತು.


ಒಂದು ಘಂಟೆಯಾಯಿತು, ಜೋರಾಗಿ ಸುರಿಯುತ್ತಿದ್ದ ಮಳೆ ಸದ್ದನ್ನು ನುಸುಳಿ ಮೊಬೈಲ್ ರಿಂಗ್ಗಾಗುತ್ತಿತ್ತು , ಪಿಕ್ ಮಾಡೋವಷ್ಟರಲ್ಲಿ ಮಿಸ್ಡ್ ಕಾಲ್ ಆಗಿತ್ತು, ಅವಳೆ ಫೋನ್ ಮಾಡಿದಳು .ಆ ಕಡೆಯಿಂದ "ಮೇಡಂ,ಬಂದಿದ್ದಿನಿ ಎಲ್ಲಿದ್ದಿರಾ?" ಅಂತ ಕೇಳಿದರು.ಇವಳು ಅತ್ತ ಇತ್ತ ಕಣ್ಣಾಡಿಸಿದಳು‌ ಮರೆಯಲ್ಲಿ ಕಂಡಂತೆ ಕಂಡನು , ಸ್ವಲ್ಪಹೊತ್ತು ಕಾಡಿಸಬೇಕೆಂಬ ಆಸೆಯಾದರೂ ಯಾಕೋ ಬೇಡ ಎಂದುಕೊಂಡೆ ಅವನತ್ತ ಹೆಜ್ಜೆ ಹಾಕಿದಳು. ಪ್ರತಿಯೊಂದು ಹೆಜ್ಜೆ ಸನಿಹ ಇಟ್ಟಂತೆ ಅವಳೆದೆಯ ಬಡಿತ ಹೆಚ್ಚಾಗತೊಡಗಿತ್ತು.ಆ ಮಂದ ಬೆಳಕಿನಲ್ಲಿ ಅವನ ಮುಖ ಅಸ್ಪಷ್ಟವಾಗಿ ಕಾಣುತ್ತಿತ್ತು,ಸ್ವಲ್ಪ ಧೈರ್ಯ ಮಾಡಿ ಹತ್ತಿರ ನಡೆದಳು.   


 ಆ ಕಣ್ಣ್ಗಳಲ್ಲಿದ್ದ  ಮುಗ್ಧ ನಗೆ ಅವಳನ್ನ ಮತ್ತಷ್ಟು ಆವರಿಸಿಕೊಂಡಿತ್ತು.ಹೇಗೆ ಮಾತ್ ಶುರು ಮಾಡ್ಲಿ ಎಂಬ ತಳಮಳ ಅವಳಿಗೆ.ಈಕೆಯೇ ಮಾತು ಶುರು ಮಾಡಲಿ ಅಂತ ಕಾಯುತ್ತಿದ್ದ... ಅದೆಷ್ಟೋ ಎದೆಯಾಳದ ಮಾತುಗಳು ತುಟಿಯಂಚಿಗೆ ಬರುವಷ್ಟರಲ್ಲಿ ಮಂಜಿನಂತೆ ಕರಗುತ್ತಿದ್ದವು.. ಅವರಿಬ್ಬರ ಮೌನದ ನಡುವೆ ಮಳೆ ಮಾತ್ರ  ಇದ್ಯಾವುದು ಲೆಕ್ಕಿಸಿದಂತೆ ಅನಾಥಪ್ರಙ್ಞೆ ಎಂಬಂತೆ ತನ್ನ ಪಾಡಿಗೆ ಸುರಿಯುತ್ತಿದ್ದ.


ಇನ್ನೇನು ಅವನೇ ಮಾತಿಗಿಳಿದ ,ಅವನ್ನೆಲ್ಲಾ ಮಾತಿಗೆ  ಮಳೆಯ ನಡುವೆ ಆಗಾಗ ಮೆಲ್ಲನೆ ಗಾಳಿ ಬೀಸಿದಂತೆ ಆಕೆ ಹುಗುಡಿತ್ತಿದ್ದಳು.ಅವನ ಎದುರಿಗೆ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡೋ ಧೈರ್ಯವಾಗಲಿ ಅವಳಿಗಿರಲಿಲ್ಲ. ಅವನೆದಾರೂ ಆ ಕಡೆ ಈ ಕಡೆ ತಿರುಗಿದರೆ ಜನ್ಮಕ್ಕೆ ಸಾಕಾಗುವಷ್ಟು ಅವನನ್ನೆ ನೋಡುತ್ತಾ ಹೃದಯ ಗೂಡಿಗೆ ಅಚ್ಚಳಿಸಿತ್ತಿದ್ದಳು.ಅವೆನೆದರು ಮುಖಕೊಟ್ಟಿ ಮಾತಾನಾಡಲಾಗದೆ, ಆ ಕಡೆ ಮುಖವೊಡ್ಡಿ  ಮಳೆಗೆ ಕೈ ಚಾಚಿ  ಅವನ ಮಾತಿಗೆ ನಾಚುತ್ತಿದ್ದಳು.ಹೀಗೆ ಅರ್ಧ ತಾಸಾಯಿತು ಮಳೆ ನಿಲ್ಲಲಿಲ್ಲ,ಸಮಯನೂ ಕೂರಲಿಲ್ಲ! ಅವಳ ಕೈಗೆ ಕಟ್ಟಿದ್ದ ವಾಚ್ ನತ್ತ ದೃಷ್ಟಿ  ನೆಟ್ಟಿ ನಿಂತ ಮಳೆ ಹನಿಗಳನ್ನು ಒರೆಸಿ,ಇತ್ತ ಬೆಳಕಿಗೆ ಒಡ್ಡಿದಳು ,ಗಡಿಯಾರದ ಮುಳ್ಳು ೭:೪೦ ಗೆ ತೋರಿಸುತ್ತಿತ್ತು....ಅವಳಿಗೂ ಮನೆಗೆ ಹೋಗೋ ಹೊತ್ತಾಯಿತು , ಅಂದರೆ ಅವನಿಗೆ ವಿದಾಯ ಹೇಳೋ ಕ್ಷಣ , ಅವಳಿಗೋ ಒಂಥರಾ ನೋವಿನ ನಲಿವು.ಅವನ ಕಣ್ಣಲ್ಲಿದ್ದ ವಿದಾಯದ  ನೋಟ ಈಗಲೂ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿತ್ತು.ಮತ್ತೊಮ್ಮೆ ಹೀಗೆ ಸಿಗ್ತಾ ಇರೋಣ ಎಂದಾಗಲಿ ಅವನು ಹೇಳಲಿಲ್ಲ ಇತ್ತ ಇವಳು ಕೇಳಲಿಲ್ಲ. ಪಾಪ ಅವಳು ಆ ಮಾತಿಗಾಗಿ ತುಂಬಾನೆ ನಿರೀಕ್ಷಿಸಿದ್ದಳು ..ಅವನಾಗಲಿ ,ಅವನ ಮಗುವಿನಂತ ನಗುವಾಗಲಿ ,ಫೋನಾಗಲಿ,ಮೇಸ್ಸೆಜ್ ಆಗಲಿ ಅವೆಲ್ಲವೂ ಕನಸೀಗ ಎಂದು ಅರಗಿಸಿಕೊಳ್ಳುವಷ್ಟುರಲ್ಲಿ ,ಕಣ್ಣಂಚಿನಲ್ಲಿ ಜಿನಿಗುತ್ತಿದ್ದ ವಿರಹದ ಕಣ್ಣಿರನ್ನು ಮಳೆರಾಯ ಅಳಿಸು ಬಿಟ್ಟಿದ್ದ....ಅವನ ಸನಿಹಕ್ಕೆ ಸರಿಯುವಾಗಿದ್ದ ಎದೆ ಬಡಿತದ ಏರಿಳಿತ ,ಈಗ ಅವನಿಂದ ದೂರಕ್ಕೆ ಸರಿಯುವಾಗ ಹೆಜ್ಜೆಗಳು ಅವಳ ಮನಸ್ಸನ್ನು ಮತ್ತಷ್ಟು ಬಿಗಿಯಾಗಿಸಿತ್ತಿತ್ತು.


ಆದರೆ ಅವನ ಮೊಗ ಮಾತ್ರ ನಿಶ್ಚಲ ,ನಿರ್ಮಲ, ಪ್ರಶಾಂತ ಯಾವುದೇ ಭಾವಕ್ಕೂ ಸಿಕ್ಕಿಕೊಂಡವನಂತೆ ಕಾಣಿಸುತ್ತಿರಲಿಲ್ಲ.ಅವಳ ಎಳೆ ಮನಸ್ಸಲ್ಲಿ ಏನೇನೋ ತುಮುಲ,ಸಂಕಟ,ವೇದನೆ, ತೃಪ್ತಿ, ಖುಷಿ, ಕೊಂಚ ಮುನಿಸು ಇವೆಲ್ಲವುದಕ್ಕೂ ಮಳೆರಾಯ ಸಾಕ್ಷಿಯಾಗಿದ್ದ... ಸಂಧ್ಯಾರಾಗದಲ್ಲಿ ಚಿಗುರೊಡೆದ ಪ್ರೀತಿ ವರುಣ ರಾಗದಲ್ಲಿ ಅಂತ್ಯವಾಗಿತ್ತು.


ಒಮ್ಮೊಮ್ಮೆ ದೂರವಾಗುವ ಕ್ಷಣಗಳು ಕೊಂಚ ನೋವು ನೀಡಿದರು ಸುಂದರವೆನಿಸುತ್ತದೆ ಬಾನಂಚಿನ  ನೇಸರ ಬೀಳ್ಕೊಡುಗೆ ಕೊಟ್ಟು ಹೋಗುವ ಹಾಗೆ!!








ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದೂರವಾಗುವ ಕ್ಷಣಗಳು ಯಾಕಿಷ್ಟು ಸುಂದರ?!

ಮೊದಲ ಪತ್ರ