ವರುಣ ರಾಗ
ಅವಳೋ ಮಾತಿನ ಮಲ್ಲಿ....ಆದರೆ ಆ ಒಂದು ಭೇಟಿ ಮಾತ್ರ ಅವಳನ್ನ ತೀರದ ಮೌನಕ್ಕೆ ಗುರಿಯಾಗಿಸಿತ್ತು. ಈ ಮೊದಲ ಭೇಟಿಯೇ ಕೊನೆಯ ಭೇಟಿ ಎಂದು ನೆನೆದಾಗಲೆಲ್ಲಾ ಅವಳ ಮನಸ್ಸು ಭಾರವೆನಿಸುತ್ತಿತ್ತು.ಆ ಕಾರಣಕ್ಕಾಗಿಯೇ ಯಾವುದಾದರೂ ಒಂದು ನೆಪ ಹೇಳಿ ಮುಂದುಡುತ್ತಲೆ ಇರುತ್ತಿದ್ದಳು. ಆಗಾಗ ವಾರಕ್ಕೊಮ್ಮೆ "ಯಾವಾಗ ಸಿಗುತ್ತಿರಾ?" ಎಂಬ ಅವನಿಂದ ಬರುವ ಸಂದೇಶವನ್ನು ಓದಿ,ದಿನ ಪೂರ ಖುಷಿ ಪಡುವ ಸಂದರ್ಭವನ್ನು ಕಿಂಚಿತ್ತು ಕಳೆದು ಕೊಳ್ಳಲು ಅವಳಿಗೆ ಇಷ್ಟವಿರಲಿಲ್ಲ.ಹೀಗೆ ಒಂದೆರಡು ತಿಂಗಾಳಾಯಿತು , ಅವಳೆಷ್ಟು ದಿನ ನೆಪವೊಡ್ಡಿಯಾಳು, ಆ ಭೇಟಿಗೆ ಒಪ್ಪುವ ದಿನ ಅನಿವಾರ್ಯವಾಗಿ ಒದಗಿತು. ಅವಳಿಗೋ ಅವನನ್ನು ನೋಡಿ,ಮಾತಾನಾಡುವ ಖುಷಿ ಒಂದು ಕಡೆಯಾದರೆ, ಇದ ನಂತರ ಫೋನಾಗಲಿ, ಮೇಸೆಜ್ ಆಗಲಿ ಅವನಿಂದ ಬರುವುದಿಲ್ಲ ಎಂದಾಗ ಅವಳ ಮನ ವ್ಯಾಕುಲತೆಗೆ ತುತ್ತಾಗುತಿತ್ತು. ಆ ದಿನ ಅವಳಿಗೋ ಹೇಳ ತೀರದ ಆನಂದ, ಆಕೆ ಎಂದೂ ಕನ್ನಡಿ ಮುಂದೆ ನಿಂತ ಹುಡಿಗೆಯೇ ಅಲ್ಲ,ಅವತ್ಯಾಕೊ ಒಂಚೂರು ಸಿಂಗರಿಸಿಕೊಳ್ಳ ಮನಸ್ಸಾಯ್ತು, ಶುಭ್ರ ಬಿಳಿ ವಸ್ತ್ರದ ಮೇಲೆ ಹಸಿರು ಬಣ್ಣದ ಚಿತ್ತಾರದ ಚೂಡಿದರ್,ಹಣೆಯ ನಡುವಲ್ಲಿ ಕಂಡರೂ ಕಾಣದಂತಿರುವ ಬಿಂದಿ, ಆಗಾಗ್ಗೆ ಗಾಳಿಲಿ ಮುಂಗುರುಳನ್ನು ಸರಿಸಲ್ಲಿಕ್ಕೆ ಪುಡಿಗೂದಲು ಬಿಟ್ಟಿದ್ದಳು,ಇದಿಷ್ಟೇ ಅವಳ ಅಲಂಕಾರ.ಆ ದಿನ ಸೂರ್ಯ ಮೋಡದ ಮರೆಯಲ್ಲಿ ಕಣ್ಣು ಮುಚ್ಚಾಲೆಯಾಡುತ್ತಿದ್ದ ಮಳೆ ಬರುವ ಎಲ್ಲಾ ಲಕ್ಷಣಗಳಿದ್ದವು.ಆಕೆ ಅವಳ ಮನೆಯಿಂದ ಬಸ್ ಹತ್ತ...